Today's Panchang
September 30, 2026
ಶ್ರೀ ಲಕ್ಷ್ಮಿನರಸಿಂಹ ಕರಾವಲಂಬ/ಕರುಣಾರಸ ಸ್ತೋತ್ರ  – ಅಧ್ಯಾಯ 1 ( ಸ್ತೋತ್ರದ ಹಿನ್ನಲೆ)
Mantras Deities

ಶ್ರೀ ಲಕ್ಷ್ಮಿನರಸಿಂಹ ಕರಾವಲಂಬ/ಕರುಣಾರಸ ಸ್ತೋತ್ರ – ಅಧ್ಯಾಯ 1 ( ಸ್ತೋತ್ರದ ಹಿನ್ನಲೆ)

ಅತ್ಯಂತ ಭಲಶಾಲಿಯಾದ ನರಸಿಂಹನನ್ನು ಪೂಜಿಸುವವರಿಗೆ ಶತ್ರುಗಳ ಬಾಧೆ ಇರುವುದಿಲ್ಲ, ದುಷ್ಟ ಶಕ್ತಿಗಳಿಂದ ತೊಂದರೆಯಾಗುವುದಿಲ್ಲ, ಜೀವನದಲ್ಲಿ ಭಯ, ಆತಂಕಗಳಿರುವುದಿಲ್ಲ, ಎಲ್ಲೆಡೆ ಜಯ ಪ್ರಾಪ್ತಿಯಾಗುವುದು, ಚತುರ್ವಿಧ ಫಲಗಳಾದ ಧರ್ಮ-ಅರ್ಥ-ಕಾಮ-ಮೋಕ್ಷವು ದೊರಕುವುದು ಎನ್ನುವುದು ಭಕ್ತರ ಹಾಗೂ ಜ್ಯೋತಿಷ್ಯದ ನಂಬಿಕೆ.
ನರಸಿಂಹನನ್ನ ಆರಾಧಿಸಲು ಶ್ರೀ ಲಕ್ಷ್ಮಿ ನರಸಿಂಹ ಕರಾವಲಂಬ ಸ್ತೋತ್ರವು ಪ್ರಭಾವಶಾಲಿ ಸ್ತೋತ್ರಗಳಲ್ಲಿ ಒಂದಾಗಿದೆ. ಇದನ್ನು ಲಕ್ಷ್ಮಿ ನರಸಿಂಹ ಕರುಣಾರಸ ಸ್ತೋತ್ರವೆಂದೂ ಸಹ ಕರೆಯಲಾಗುತ್ತದೆ. ಇದರ ನಿತ್ಯ ಪಠಣೆಯಿಂದ ಜೀವನದಲ್ಲಿ ಎಂತಹುದೇ ಸಂಕಷ್ಟವಿದ್ದರೂ ನರಸಿಂಹ ನಮ್ಮನ್ನು ಪಾರು ಮಾಡಿ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸುತ್ತಾನೆ ಎನ್ನುವುದರಲ್ಲಿ ಸಂದೆಹವಿಲ್ಲ.

ಹಾಗಾದರೆ ಈ ಸ್ತೋತ್ರದ ವಿಶೇಷತೆ ಏನು?

ಪ್ರತಿ ಶ್ಲೋಕದಲ್ಲಿಯೂ ಭಕ್ತನು ತನ್ನ ಅಸಹಾಯಕತೆಯನ್ನು ವಿವಿಧ ರೂಪಗಳ ಮೂಲಕ ವ್ಯಕ್ತಪಡಿಸುತ್ತಾನೆ. ಕೆಲವೊಮ್ಮೆ ತಾನು ಸಂಸಾರದ ಸಮುದ್ರದಲ್ಲಿ ಮುಳುಗುತ್ತಿರುವವನಂತೆ, ಕೆಲವೊಮ್ಮೆ ವಿಷಪೂರಿತ ಸರ್ಪದಿಂದ ಕಚ್ಚಿಸಿಕೊಂಡವನಂತೆ, ಮತ್ತೊಮ್ಮೆ ಭಯಾನಕ ಕಾಡಿನಲ್ಲಿ ದಾರಿ ತಪ್ಪಿದವನಂತೆ ಹೀಗೆ ಇನ್ನು ಹಲವಾರು ಪರಿಯಲ್ಲಿ ಜೀವನದ ಕಷ್ಟವನ್ನ ವ್ಯಕ್ತಪಡಿಸುತ್ತಾ, ಪ್ರತಿಬಾರಿಯೂ “ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್” ಎಂಬುವ ಒಂದೇ ಪ್ರಾರ್ಥನೆ ಭಗವಂತನ ಮುಂದಿಡುತ್ತಾನೆ. ಅರ್ಥಾತ್, “ಓ ಲಕ್ಷ್ಮೀ ನರಸಿಂಹನೇ, ನನಗೆ ನಿನ್ನ ಸಹಾಯಹಸ್ತದ ಆಶ್ರಯವನ್ನು ನೀಡು” ಎಂದು ಪ್ರಾರ್ಥಿಸಿದಾಗ ಸ್ವಾಮಿಯು ನಮ್ಮನ್ನು ಕರುಣಿಸುವುದು ಪ್ರತಿ ಶ್ಲೊಕದಲ್ಲಿ ವ್ಯಕ್ತವಗುತ್ತದೆ. ಇದನ್ನ ರಚಿಸಿದವರು ಯಾರು?, ಯಾವ ಸನ್ನಿವೆಶದಲ್ಲಿ ರಚಿಸಿದರು ? ಎನ್ನುವುದೇ ಈ ಸ್ತೋತ್ರದ ವಿಶೇಷತೆ, ಮುಂದಿನ ಸಂಚಿಕೆಯಲ್ಲಿ ಅದನ್ನ ವಿಸ್ತಾರವಾಗಿ ತಿಳಿಯೋಣ,

ನನಗೇಕೆ ಈ ವಿಷಯದ ಬಗ್ಗೆ ಬರೆಯುವ ಆಸಕ್ತಿ?

ನನಗೆ ಚಿಕ್ಕಂದಿನಿಂದಲೂ ನರಸಿಂಹನೆಂದರೆ ಒಂದು ಸೆಳೆತ. ಡಾ . ರಾಜಕುಮಾರ್ ರವರ ಅಭಿನಯದ ಭಕ್ತ ಪ್ರಹ್ಲಾದ ಚಿತ್ರವನ್ನು ಅದೆಷ್ಟೋ ಬಾರಿ ನೋಡಿದ್ದೇನೆ. ಪ್ರತಿ ಭಾರಿ ನೋಡಿದಾಗಲೂ ಅದೇ ರೋಮಾಂಚನ!, ಬಹುಶಃ ನನ್ನ ಪಾಲಿನ ಸೂಪರ್ ಹೀರೋ ನರಸಿಂಹನೇ ಎಂದರೆ ತಪ್ಪಾಗಲಾರದು. ಇತ್ತೀಚಿಗೆ ಬಂದ ನರಸಿಂಹಾವತಾರ ಅನಿಮೇಷನ್ ಚಲನ ಚಿತ್ರವು ನರಸಿಂಹನ ಪರಾಕ್ರಮವನ್ನ ಮತ್ತಷ್ಟು ವೈಭವೀಕರಿಸಿದೆ.
ನಾನು ಹಲವಾರು ವರ್ಷಗಳಿಂದ ಚಿಕ್ಕ ಮಕ್ಕಳಿಗೆ ಶ್ಲೋಕಗಳನ್ನು ಕಲಿಸುವ online ಶಿಬಿರಗಳನ್ನ ಮಾಡುತ್ತಾ ಬರುತಿದ್ದೇನೆ. ಕಳೆದ ಬೇಸಿಗೆಯಲ್ಲಿ ಮಕ್ಕಳಿಗೆ ಲಕ್ಷ್ಮಿ ನರಸಿಂಹ ಕರಾವಲಂಬ ಸ್ತೋತ್ರ ಮತ್ತು ಅದರ ಅರ್ಥವನ್ನ ಹೇಳಿ ಕೊಡುವ ಅವಕಾಶ ದೊರೆಯಿತು. ಹಲವು ವರ್ಷಗಳಿಂದ ಲಕ್ಷ್ಮಿ ನರಸಿಂಹ ಕರಾವಲಂಬ ಸ್ತೋತ್ರವನ್ನ ಪಠಣ ಮಾದುತ್ತಿದ್ದರೂ ಸಹ ಇದರ ಸಂಪೂರ್ಣ ಅರ್ಥ ನನಗೂ ತಿಳಿದಿದ್ದು ಈ ಶಿಬಿರದ ತಯಾರಿಯ ಸಮಯದಲ್ಲೇ. ಒಂದು ಸಂಸ್ಕೃತ ಸುಭಾಷಿತದಲ್ಲಿ ಬರುವಂತೆ, “ವ್ಯಯೇ ಕೃತೇ ವರ್ಧತೇ ಏವ ನಿತ್ಯಂ ವಿದ್ಯಾಧನಂ ಸರ್ವ ಧನ ಪ್ರಧಾನಂ” ಎನ್ನುವಂತೆ, ವಿದ್ಯೆ ಎಂಬ ಸಂಪತ್ತು ಖರ್ಚು ಮಾಡಿದಷ್ಟು ವೃದ್ಧಿಸುತ್ತಾ ಹೋಗುತ್ತದಂತೆ. ಇದಕ್ಕೆ ನನ್ನ ಉದಾಹರಣೆಯೂ ಸಾಕ್ಷಿ. ಮಕ್ಕಳಿಗೆ ಹೇಳಿ ಕೊಡಲೋಸುಗ ನಾನು ಈ ಸ್ತೋತ್ರದ ಅರ್ಥವನ್ನ ಕಲಿತೆ, ಮಕ್ಕಳ ಜೊತೆಗೆ ನನ್ನ ಜ್ಞಾನವು ವೃದ್ಧಿಯಾಯಿತು. ಹಾಗಾಗಿ ಇದನ್ನ ಇನ್ನಷ್ಟು ಜನರಿಗೆ ತಲುಪಿಸುವ ದೃಷ್ಟಿಯಲ್ಲಿ, ಈ ಅಂಕಣದಲ್ಲಿ ಲಕ್ಷ್ಮಿ ನರಸಿಂಹ ಸ್ತೋತ್ರದ ಮಹಿಮೆ ಮತ್ತು ಅದರ ಅರ್ಥವನ್ನ ವಿವರಿಸಲಿದ್ದೇನೆ. ಇದನ್ನ ಸಂಪೂರ್ಣಗೊಳಿಸಲು ಅಂದಾಜು ಹದಿನೆಂಟರಿಂದ ಇಪ್ಪತ್ತು ಸಂಚಿಕೆಗಳು ಬೇಕಾಗ ಬಹುದು. ನಿಮಗೆ ಈ ಪ್ರಯತ್ನ ಉಪಯೋಗವಾಗುತ್ತದೆಂದು ಭಾವಿಸಿ ಈ ಸಂಚಿಕೆಯನ್ನ ೨೦೨೬ ಇಸವಿ ಶ್ರೀ ಪರಾಭವ ನಾಮ ಸಂವತ್ಸರ, ಶ್ರಾವಣ ಮಾಸ, ಶುಕ್ಲ ಸಪ್ತಮಿ ಈ ಶುಭ ದಿನದಂದು ಪ್ರಾರಂಭಿಸುತ್ತಿದ್ದೇನೆ.
ಮೊದಲಿಗೆ ಅತ್ಯಂತ ಸಂಕ್ಷಿಪ್ತವಾಗಿ ನರಸಿಂಹಾವತಾರದ ಕಥೆ, ಈ ಸ್ತೋತ್ರದ ಕರ್ತೃ ಮತ್ತು ರಚನೆಯ ಸನ್ನಿವೇಶವನ್ನ ತಿಳಿಯೋಣ.

ನರಸಿಂಹ ಸ್ವಾಮಿ ಯಾರು?

ವಿಷ್ಣುವಿನ ದಶಾವತಾರಗಳಲ್ಲಿ ನಾಲ್ಕನೇ ಅವತಾರವೇ ನರಸಿಂಹ ಅವತಾರ. ಬ್ರಹ್ಮನ ನಾಲ್ಕು ಮಾನಸ ಪುತ್ರರೂ, ಋಷಿಗಳೂ ಆದ ಸನಕ, ಸನಂದನ, ಸನಾತನ ಮತ್ತು ಸನತ್ಕುಮಾರರು ಒಮ್ಮೆ ವೈಕುಂಠವನ್ನು ಪ್ರವೇಶಿಸಲು ಮುಂದಾದಾಗ ಆ ಚತುಷ್ಕುಮಾರರನ್ನು ವೈಕುಂಠ ದ್ವಾರಪಾಲಕರಾದ ಜಯ ವಿಜಯರು ಶ್ರೀ ವಿಷ್ಣುವು ವಿಶ್ರಾಂತಿಸುತ್ತಿದ್ದು ಪ್ರವೇಶಕ್ಕೆ ಅವಕಾಶವಿಲ್ಲವೆಂದು ತಡೆಯುತ್ತಾರೆ.ಅದಕ್ಕೆ ಕೋಪಗೊಂಡ ಮುನಿಗಳು ಜಯ ವಿಜಯರಿಗೆ ವೈಕುಂಠದಿಂದ ದೂರವಾಗುವಂತೆಯೂ ಭೂಮಿಯ ಮೇಲೆ ಅವತಾರವೆತ್ತುವಂತೆಯೂ ಶಪಿಸುತ್ತಾರೆ, ಆಗ ಜಯ ವಿಜಯರು ಶಾಪ ವಿಮೋಚನೆಗಾಗಿ ವಿಷ್ಣುವಿನ ಮೊರೆ ಹೋಗಲಾಗಿ ವಿಷ್ಣುವು ಹೇಳುತ್ತಾನೆ, ಋಷಿಗಳ ಶಾಪವನ್ನ ತಾನು ತಡೆಯಲಾರೆ, ಶಾಪದ ಫಲವನ್ನ ನೀವು ಅನುಭವಿಸಲೇ ಬೇಕು ಆದರೆ ವಿಮೋಚನಾ ಮಾರ್ಗವನ್ನ ತಿಳಿಸುವೆ ಎಂದು ಹೇಳಿ, ಮೂರು ಜನ್ಮಗಳಲ್ಲಿ ವಿಷ್ಜುವಿನ ಶತ್ರುವಾಗಿ ಅಥವಾ ಏಳು ಜನ್ಮಗಳಲ್ಲಿ ವಿಷ್ಣುವಿನ ಭಕ್ತರಾಗಿ ಜನ್ಮವೆತ್ತಿದರೆ ಶಾಪ ವಿಮೋಚನೆಯಾಗುವುದೆಂದು ಆಶೀರ್ವದಿಸುತ್ತಾರೆ. ಶೀಘ್ರವಾಗಿ ವೈಕುಂಠಕ್ಕೆ ಹಿಂತಿರುಗುವ ತವಕವಿದ್ದ ಜಯ ವಿಜಯರು ಮೂರು ಜನ್ಮ ಶತ್ರುಗಳಾಗಿ ಜನ್ಮವೆತ್ತಲು ಆಯ್ದುಕೊಳ್ಳುತ್ತಾರೆ. ಜಯ ವಿಜಯರು ಭೂಮಿಯ ಮೇಲೆ ಸತ್ಯ ಯುಗದಲ್ಲಿ ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರಾಗಿ, ತ್ರೇತಾಯುಗದಲ್ಲಿ ರಾವಣ ಕುಂಭಕರ್ಣರಾಗಿ ಮತ್ತು ದ್ವಾಪರ ಯುಗದಲ್ಲಿ ಶಿಶುಪಾಲ ಮತ್ತು ದಂತವಕ್ರರಾಗಿ ಜನ್ಮ ತಾಳಿ, ಪ್ರತಿ ಭಾರಿಯು ವಿಷ್ಣುವಿನಿಂದ ಕೊಲ್ಲಲ್ಪಟ್ಟು ತಮ್ಮ ಶಾಪ ವಿಮೋಚನೆಯಾದ ನಂತರ ಪುನಃ ವೈಕುಂಠ ತಲುಪುತ್ತಾರೆ.
ಹಿರಣ್ಯಾಕ್ಷನನ್ನು ವಿಷ್ಣುವು ವರಾಹ ಅವತಾರದಲ್ಲಿ ಸಂಹರಿಸಿದರೆ, ಹಿರಣ್ಯಕಶಿಪುವನ್ನು ನರಸಿಂಹ ಅವತಾರದಲ್ಲಿ ಸಂಹರಿಸಿದರು.
ತನ್ನ ಪ್ರಿಯ ಭಕ್ತನಾದ ಪ್ರಹ್ಲಾದನ ರಕ್ಷಣೆಗಾಗಿ ಒಂದು ಅವತಾರವನ್ನೇ ಎತ್ತಿದ ಮಹಾ ವಿಷ್ನುವು ತನ್ನನ್ನು ನಂಬಿದ ಭಕ್ತರ ಕೈಯನ್ನು ಎಂದು ಬಿಡಲಾರ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆಯೇ ಬೇಕಿಲ್ಲ.

ಮುಂದಿನ ಸಂಚಿಕೆಯಲ್ಲಿ….

ಮುಂದಿನ ಸಂಚಿಕೆಯಲ್ಲಿ ಕರಾವಲಂಬ ಸ್ತೋತ್ತವನ್ನು ರಚಿಸಿದ ಶಂಕರಾಚಾರ್ಯರ ಬಗ್ಗೆ ಹಾಗೂ ಈ ಸ್ತೋತ್ರವನ್ನು ಅವರು ರಚಿಸಿದ ಅತ್ಯಂತ ಕುತೂಹಲಕಾರಿ ಸನ್ನಿವೇಶವಾದ ಮಂಡನಮಿಶ್ರನೊಂದಿಗೆ ನಡೆದ ತರ್ಕ, ಶಂಕರರು ಪರಕಾಯ ಪ್ರವೇಶ ಮಾಡಿದ ಕಥೆ ಮತ್ತು ಶಂಕರರ ದೇಹವು ಅಗ್ನಿಗೆ ಆಹುತಿಯಾಗಿದ್ದುದರ ರೋಚಕ ಕಥೆಯನ್ನ ತಿಳಿಯುವ.

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ಸ್ ನಲ್ಲಿ ಬರೆದು ತಿಳಿಸಿ. ನಿಮಗೆ ಮತ್ತ್ಯಾವ ವಿಶಯದ ಬಗ್ಗೆ ತಿಳಿಯುವ ಆಸಕ್ತಿ ಇದೆ ಎಂದು ತಿಳಿಸಿ.
ಧನ್ಯವಾದಗಳು.

  • ಸುದರ್ಶನ್ ಹುಲಿವಾನ್ ಪದ್ಮನಾಭನ್

Leave a Reply

Your email address will not be published. Required fields are marked *